Description
ಕನ್ನಡದ ಅತ್ಯಂತ ಮಹತ್ವದ ಕಾದಂಬರಿ ಎಂದು ಗುರುತಿಸಲಾಗುವ ‘ಮಲೆಗಳಲ್ಲಿ ಮದುಮಗಳು’ ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ಸೃಜನಶೀಲ ಸೃಷ್ಟಿಗಳಲ್ಲಿ ಒಂದು. ಮಲೆನಾಡಿನ ಒಂದು ಕಾಲಘಟ್ಟದ ಅದರಲ್ಲೂ 20ನೇ ಶತಮಾನದ ಆರಂಭದ ದಿನಗಳ ಬದುಕನ್ನು ಸೊಗಸಾದ ರೀತಿಯಲ್ಲಿ ಹಿಡಿದಿಡುವ ಕೃತಿಯಿದು. ಇದು ಕಥಾನಾಯಕ, ಅಥವಾ ನಾಯಕಿ ಪ್ರಧಾನ ಕಥಾನಕ ಹೊಂದಿರುವ ಕಾದಂಬರಿಯಲ್ಲ. ಕಾದಂಬರಿಯ ಆರಂಭದಲ್ಲಿಯೇ ಲೇಖಕರು ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ, ಯಾವುದು ಯಕ:ಶ್ಚಿತವಲ್ಲ, ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕು ತುದಿಇಲ್ಲ,ಇಲ್ಲಿ ಅವಸರವು ಸಾವದಾನದ ಬೆನ್ನೇರಿದೆ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದು ಅಲ್ಲ ವ್ಯರ್ಥ. ನೀರೆಲ್ಲವು ತೀರ್ಥ, ತೀರ್ಥವು ನೀರೇ.” ಎಂಬ ಮಾತುಗಳೊಂದಿಗೇ ಆರಂಭಿಸುತ್ತಾರೆ. ಮಲೆನಾಡಿನ ಒಟ್ಟಂದದ ಬದುಕು ಅದು ಕಟ್ಟುವ ಕ್ರಮ ಮನಸೂರೆಗೊಳ್ಳುವಂತಿದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಶೀರ್ಷಿಕೆಯೇ ಸೂಚಿಸುವಂತೆ ಮದುವೆಯ ಅದರಲ್ಲೂ ಮದುಮಗಳ ಸುತ್ತ ಕಥೆ ಸುತ್ತುತ್ತದೆ. ಮಾನವೀಯ ಬದುಕು ಕಾದಂಬರಿಯ ಜೀವ ಮತ್ತು ಜೀವಾಳ. ಗುತ್ತಿ ತಿಮ್ಮಿಯರ ಪ್ರೇಮ ಪ್ರಸಂಗ, ಅಭೂತಪೂರ್ವವಾದ ಮಲೆನಾಡಿನ ಚಿತ್ರಣ, ಸ್ವಾಭಾವಿಕ ವರ್ಣನೆಗಳು ಓದುಗರ ಮನಸೂರೆಗೊಳ್ಳುತ್ತವೆ. ಕಣ್ಣಿಗೆ ಕಟ್ಟುವಂತಹ ನಿರೂಪಣೆ, ಬದುಕಿನ ವೈವಿಧ್ಯತೆ ಮತ್ತು ಸಂಕೀರ್ಣತೆಗಳನ್ನು ದಾಖಲಿಸುವ ಕಾರಣಕ್ಕಾಗಿ ಈ ಕೃತಿ ತುಂಬಾ ಮಹತ್ವ ಪಡೆದುಕೊಂಡಿದೆ. ಈ ಕಾದಂಬರಿಯ ಓದು ಒಂದು ವಿಭಿನ್ನ ಅನುಭವ ಒದಗಿಸುತ್ತದೆ. ಕನ್ನಡದಲ್ಲಿ ಓದಲೇ ಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಮದುಮಗಳು ಮೊದಲ ಸಾಲಿನಲ್ಲಿ ನಿಲ್ಲುತ್ತದೆ.
Reviews
There are no reviews yet.